ಪ್ರಕೃತಿ ಬೆಳಗಾವಿ

ಜನಪದ ಹೃದಯದ ಮತ್ತು ವೈಚಾರಿಕತೆಯ ಸಾಹಿತ್ಯ ಡಾ.ರಾಜು ಕಂಬಾರ…!!

ಪ್ರಕೃತಿ ಬೆಳಗಾವಿ ಸುದ್ದಿ : ಜನಪದ ಸಾಹಿತ್ಯ ಮನಮುಟ್ಟುವ ಮತ್ತು ಭಾವನಿಷ್ಟವಾದ ಸಾಹಿತ್ಯವಾಗಿದ್ದು, ಮಾರ್ಮಿಕತೆಯ ಮಾತುಗಳ ಮೂಲಕ ಸಹೃದಯರಲ್ಲಿ ವೈಚಾರಿಕತೆಯನ್ನು ಮೂಡಿಸುತ್ತದೆ ಎಂದು ಸಾಹಿತಿ-ಅಧ್ಯಾಪಕ ಡಾ.ರಾಜು ಕಂಬಾರ ಅಭಿಪ್ರಾಯಿಸಿದರು.

ಸಮೀಪದ ಪಾಶ್ಚಾಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ಕನ್ನಡ ಕಲ್ಪವೃಕ್ಷ ಸಂಘ, ಕನ್ನಡ ವಿಭಾಗದ ಆಶ್ರಯದಲ್ಲಿ ಬುಧವಾರ ಜರುಗಿದ “ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು” ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಕಂಬಾರ ಅವರು ಜನಪದರು ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಂಡು ಬೆಳೆದವರು ಜೀವನ ಮೌಲ್ಯಗಳೇ ಗ್ರಾಮೀಣರ ಒಡವೆ-ವಸ್ತು-ಆಭರಣಗಳಾಗಿದ್ದು, ನ್ಯಾಯ-ನೀತಿ, ಧರ್ಮ-ತ್ಯಾಗ, ಶೀಲ-ಚಾರಿತ್ರೆ, ಪ್ರೀತಿ-ಪ್ರೇಮ, ಕರುಣೆ-ವಾತ್ಸಲ್ಯ-ನಂಬಿಕೆಗಳು ಜನಪದರ ಜೀವನದ ಅತ್ಯುನ್ನತ ಮೌಲ್ಯಗಳಾಗಿವೆ.

ಜೀವನ ಮೌಲ್ಯಗಳನ್ನು ಬಿಟ್ಟು ಜನಪದರಿಲ್ಲ; ಜನಪದರನ್ನು ಬಿಟ್ಟು ಜೀವನ ಮೌಲ್ಯಗಳಿಲ್ಲ. ಜನಪದರು ಮತ್ತು ಮೌಲ್ಯಗಳು ಅಬೇಧಿತ ಕೃಷಿ ಸಂಸ್ಕೃತಿಯ ಪ್ರತೀಕವಾಗಿವೆ ಎಂದ ಅವರು, ಜನಪದರ ಜೀವನ ಮೌಲ್ಯಗಳ ಕುರಿತು ಹಲವಾರು ಹಾಡುಗಳನ್ನು ಹಾಡಿ, ಬಯಲಾಟಗಳ ಕುಣಿತಗಳನ್ನು ಕುಣಿದು ವಿದ್ಯಾರ್ಥಿಗಳ ಮನರಂಜಿಸಿದರು.

ಸಸಿಗೆ ನೀರೂಣಿಸುವ ಮೂಲಕ ಕಾರ್ಯಕ್ರಮವನ್ನು ಅತಿಥಿ-ಗಣ್ಯರು ಉದ್ಘಾಟಿಸಿದರು.

ಜನಪದ ಸಾಹಿತ್ಯದಲ್ಲಿ ಬದುಕಿನ ಮೌಲ್ಯಗಳಿದ್ದು ಅವುಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಿಕೊಳ್ಳಬೇಕೆಂದು ಕನ್ನಡ ವಿಭಾಗ ಮುಖ್ಯಸ್ಥ ಡಾ. ಸಿ.ಎಂ. ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಶ್ರೀಧರ ಕುಲಕರ್ಣಿ ವಹಿಸಿ ಮಾತನಾಡಿ, ಜನಪದ ಸಾಹಿತ್ಯ-ಕಲೆ-ಸಂಸ್ಕೃತಿಗಳು ಇಂದು ನಶಿಸುತ್ತಿವೆ. ಇವುಗಳ ಉಳಿವಿಗಾಗಿ ಪ್ರಯತ್ನಿಸಬೇಕೆಂದರು.

ಪ್ರೊ. ನೀಲಕಂಠ ಭೂಮನ್ನವರ ಸ್ವಾಗತಿಸಿದರು, ಪ್ರೊ.ಗಿರಿಮಲ್ಲಪ್ಪ ಕರಿಜಾಡರ ಅತಿಥಿ ಪರಿಚಯಿಸಿದರು, ಕು. ಸುಷ್ಮಿತಾ ಚೌಗಲಾ ಸಂಗಡಿಗರು ಪ್ರಾರ್ಥಿಸಿದರು .ವಿದ್ಯಾರ್ಥಿಗಳಾದ ಕಲ್ಮೇಶ ಹಗೆದಾಲ ನಿರೂಪಿಸಿದರೆ ವಿದ್ಯಾರ್ಥಿ ಕೆಂಚಪ್ಪ ಎಚ್ ವಂದಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಅಧ್ಯಾಪಕರುಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.************************

Leave a Reply

Your email address will not be published. Required fields are marked *

Back to top button