*ಗ್ರಾಮದ ಒಗ್ಗಟ್ಟಿಗೆ ಸಾಕ್ಷಿಯಾದ ಮುನಿಯಪ್ಪನ ಹಬ್ಬ: ನಾರ್ಗೋನಹಳ್ಳಿಯಲ್ಲಿ ಸಂಭ್ರಮದ ಆಚರಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಕೃಷ್ಣರಾಜಪೇಟೆ ವರದಿ : ತಾಲ್ಲೂಕಿನ ನಾರ್ಗೋನಹಳ್ಳಿ ಗ್ರಾಮದಲ್ಲಿ ಸನಾತನ ಸಂಪ್ರದಾಯದಂತೆ ಅತ್ಯಂತ ಸಡಗರ ಹಾಗೂ ಭಕ್ತಿಯಿಂದ ಮುನಿಯಪ್ಪನ ಹಬ್ಬವನ್ನು ಆಚರಿಸಲಾಯಿತು.
ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ಮುನಿಯಪ್ಪನ ಗುಡಿಯನ್ನು ನಿರ್ಮಿಸಿ ಸಾಮೂಹಿಕವಾಗಿ ಹಬ್ಬವನ್ನು ಆಚರಿಸುವ ಮೂಲಕ ಗ್ರಾಮದ ಒಗ್ಗಟ್ಟನ್ನು ಪ್ರದರ್ಶಿಸಿದರು.
ಈ ಹಬ್ಬದ ವಿಶೇಷತೆಯೆಂದರೆ ಗ್ರಾಮದ ಪ್ರತಿಯೊಂದು ಕುಟುಂಬದವರು ತಮ್ಮ ಮನೆಯಲ್ಲಿ ಹಬ್ಬ ಮಾಡದೆ, ಗ್ರಾಮದ ನಿಗದಿತ ಸ್ಥಳದಲ್ಲಿ ಒಂದೇ ಕಡೆ ಸಾಲಾಗಿ ಒಲೆಗಳನ್ನು ನಿರ್ಮಾಣ ಮಾಡಿ, ನೂರಾರು ಒಲೆಗಳಿಂದ ಹೊರಬರುತ್ತಿದ್ದ ಹೊಗೆ ಹಾಗೂ ಅಡುಗೆಯ ಪರಿಮಳ ಗ್ರಾಮದಾದ್ಯಂತ ಹಬ್ಬದ ಕಳೆಯನ್ನು ಹೆಚ್ಚಿಸಿತ್ತು.
ಗ್ರಾಮಸ್ಥರು ಭಕ್ತಿ-ಭಾವದಿಂದ ಸಿದ್ಧಪಡಿಸಿದ ಮಾಂಸ ಆಹಾರವನ್ನು ಸಜ್ಜುಗೊಳಿಸಿ ಮುನಿಯಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು.
ಗ್ರಾಮಕ್ಕೆ ಯಾವುದೇ ಕುತ್ತು ಬರದಂತೆ, ಬೆಳೆಗಳು ಸಮೃದ್ಧವಾಗಿ ಬರಲಿ ಮತ್ತು ಗ್ರಾಮದ ಜನರೆಲ್ಲರೂ ಸುಖ-ಶಾಂತಿಯಿಂದ ಇರಲಿ ಎಂದು ಮುನಿಯಪ್ಪನಲ್ಲಿ ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು. ಗ್ರಾಮದ ಯಜಮಾನರು, ಯುವ ಮುಖಂಡರು, ಮಹಿಳೆಯರು, ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡು ಹಬ್ಬದ ಯಶಸ್ವಿಗೆ ಶ್ರಮಿಸಿದರು.*********************************






