*ಮಹಿಳಾ ಪೌರಕಾರ್ಮಿಕರಿಗೆ ಗೌರವ ನೀಡಿ : ಸಮಾಜ ಚಿಂತಕ ಎ.ಆರ್. ಹಲಗೇಕರ್ ಸಂದೇಶ*

ಪ್ರಕೃತಿ ಬೆಳಗಾವಿ ಸುದ್ದಿ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಮಾಜ ಸೇವಕ ಹಾಗೂ ಸಮಾಜ ಚಿಂತಕರಾದ ಎ.ಆರ್. ಹಲಗೇಕರ್ ಅವರು ಮಹಿಳಾ ಪೌರಕಾರ್ಮಿಕರಿಗೆ ಗೌರವ ಸಲ್ಲಿಸುವ ಮೂಲಕ ಮಹಿಳಾ ದಿನವನ್ನು ವಿಶಿಷ್ಟವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಅವರು ಮಹಿಳಾ ಪೌರಕಾರ್ಮಿಕರಿಗೆ ಹೂವಿನ ಗಿಡಗಳನ್ನು ನೀಡುವ ಮೂಲಕ ಸನ್ಮಾನಿಸಿ, ಅವರ ಸೇವೆಯನ್ನು ಕೊಂಡಾಡಿದರು.
ಸಮಾಜವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ಮಹಿಳಾ ಪೌರಕಾರ್ಮಿಕರು ಪ್ರತಿದಿನವೂ ತಮ್ಮ ಶ್ರಮದ ಮೂಲಕ ನಮ್ಮ ಪರಿಸರವನ್ನು ಸ್ವಚ್ಛವಾಗಿಡುತ್ತಿದ್ದು, ಜನರ ಆರೋಗ್ಯಕರ ಬದುಕಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಸೇವೆಯನ್ನು ಸಮಾಜವು ಸದಾ ಗೌರವದಿಂದ ಕಾಣಬೇಕು ಎಂದು ಹಲಗೇಕರ್ ಅವರು ಸಂದೇಶ ನೀಡಿದರು.
ಮಹಿಳಾ ಪೌರಕಾರ್ಮಿಕರನ್ನು ಸಮಾಜದಲ್ಲಿ ಗೌರವಯುತವಾಗಿ ಕಾಣುವ ಮನೋಭಾವ ಬೆಳೆಸಬೇಕು. ಅವರ ಪರಿಶ್ರಮವನ್ನು ಮೆಚ್ಚಿ ಅವರಿಗೆ ಮಾನ್ಯತೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಮಹಿಳಾ ದಿನಾಚರಣೆಯ ಈ ಕಾರ್ಯಕ್ರಮದ ಮೂಲಕ ಮಹಿಳಾ ಪೌರಕಾರ್ಮಿಕರ ಸೇವೆಯನ್ನು ಸ್ಮರಿಸಿ, ಅವರಿಗೆ ಗೌರವ ಸಲ್ಲಿಸುವ ಮಹತ್ವವನ್ನು ಸಮಾಜಕ್ಕೆ ತಿಳಿಸಲಾಯಿತು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳೆಯರು ಸಮಾನತೆ, ಹಕ್ಕು ಮತ್ತು ಗೌರವವನ್ನು ಸಾರುವ ಫಲಕಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಮಹಿಳೆಯರು ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಅವಕಾಶಗಳು ದೊರೆಯಬೇಕು, ಅವರ ಹಕ್ಕುಗಳನ್ನು ಕಾಪಾಡಬೇಕು ಮತ್ತು ಅವರಿಗೆ ಗೌರವದ ಸ್ಥಾನಮಾನ ನೀಡಬೇಕು ಎಂಬ ಸಂದೇಶವನ್ನು ಫಲಕಗಳ ಮೂಲಕ ವ್ಯಕ್ತಪಡಿಸಿದರು.
ವಾರ್ಡ ನಂ11. ಆರೋಗ್ಯ ನಿರೀಕ್ಷಕರು ಶ್ರೀ ಸಾದಿಕ್ ಧಾರವಾಡ್ಕರ್ ಹಾಗೂ ಆರೋಗ್ಯ ನಿರೀಕ್ಷಕರು ವಾರ್ಡ ನಂ 7.ಶ್ರೀ ಶೀತಲ್ ರಾಮತೀರ್ಥ,ಸೂಪರ್ ವೈಸರ್ ಶ್ರೀ ರಾಯಪ್ಪಾ ಕಳಸಣ್ಣವರ್ ಹಾಗೂ ಬಾಬು ಕೋಲಕಾರ ಮತ್ತು ಭಾವಕನ್ನಾ ಪಿರಗಾನೆ ,ಹಾಗೂ ಸ್ವೇತಾ ಕೋಟ್ಯಾನ್ ಹಾಗೂ ಸಿಬ್ಬಂದಿ ವರ್ಗದವರು ಮಹಾನಗರ ಪಾಲಿಕೆ ಬೆಳಗಾವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.******************************





