ಸಂಚಾರ ನಿಯಮ ಪಾಲಿಸಿ; ಹೆಲ್ಮೇಟ್, ಸಿಟ್ ಬೆಲ್ಟ್ ಧರಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು…!!
ಪ್ರಕೃತಿ ಬೆಳಗಾವಿ ಸುದ್ದಿ : ಧಾರವಾಡ : ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಜೀವದೊಂದಿಗೆ ಇತರರ ಜೀವವನ್ನು ಕಾಪಾಡಬೇಕು. ಪ್ರತಿಯೋಬ್ಬರು ಸ್ವಯಂ ಪ್ರೇರಣೆಯಿಂದ ನಿಯಮಗಳನ್ನು ಪಾಲಿಸುವುದರಿಂದ ಸುರಕ್ಷಿತ ಸಂಚಾರ ಸಾದ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಕೆಸಿಡಿ ಆವರಣದಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಕೆಸಿಡಿ ಕಾಲೇಜು, ಎನ್‍ಎಸ್‍ಎಸ್ ಘಟಕ ಹಾಗೂ ಇತರ ವಿಭಾಗಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಇದ್ದು, ವಾಹನಗಳ ದಟ್ಟಣೆ ಅಧಿಕವಾಗಿದೆ ಮತ್ತು ವಾಹನಗಳ ಸಂಖ್ಯೆಯು ಹೆಚ್ಚಾಗಿದೆ. ವಾಹನ ಸವಾರರು ಜಾಗರೂಕತೆಯಿಂದ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸುವ ಅಗತ್ಯವಿದೆ. ಅನೇಕರು ವಿಶೇಷವಾಗಿ ಯುವಕರು ವಾಹನವನ್ನು ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ವಾಹನ ಚಲಾಯಿಸುತ್ತಾರೆ. ರಸ್ತೆಯ ಸಂಚಾರದ ವೇಗದ ಮಿತಿಗೆ ಅನುಸಾರವಾಗಿ ವಾಹನ ಓಡಿಸದೆ, ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಉಂಟಾಗುತ್ತವೆ ಎಂದು ಹೇಳಿದರು.
ಪ್ರತಿಯೊಬ್ಬ ನಾಗರಿಕರು ವಾಹನ ಚಲಾಯಿಸುವಾಗ ಹೆಲ್ಮೇಟ್ ಧರಿಸಬೇಕು ಮತ್ತು ಸಿಟ್‍ಬೆಲ್ಟ್ ಧರಿಸಬೇಕು ಈ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ಅಧಿಕಾರಿ ಡಾ.ಗೋಪಾಲ್ ಎಂ. ಬ್ಯಾಕೋಡ ಅವರು ಮಾತನಾಡಿ, 25 ರಿಂದ 40ರ ವಯೋಮಾನದ ಜನರು ಜಿಲ್ಲೆಯಲ್ಲಿ ಪ್ರತಿ ವರ್ಷ ಸರಿಸುಮಾರು 450 ಜನ ರಸ್ತೆ ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ. ಅವರನ್ನೇ ಅವಲಂಭಿಸಿದ ಹೆಂಡತಿ ಮಕ್ಕಳು ಮತ್ತು ತಂದೆ ತಾಯಿಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ ಎಂದು ಅವರು ತಿಳಿಸಿದರು
ವಾಹನಗಳ ಬ್ರೆಕ್ ಫೇಲ್, ನಿಯಂತ್ರಣ ತಪ್ಪಿ ಆಗುವ ಅಪಘಾತಕ್ಕಿಂತ ಹೆಚ್ಚಾಗಿ ವಾಹನಗಳನ್ನು ಅತ್ತೀ ವೇಗವಾಗಿ ಚಲಾಯಿಸುವುದು, ಹೆಲ್ಮೆಟ್, ಸೀಟ್ ಬೆಲ್ಟ್ ದರಿಸದೆ ವಾಹನವನ್ನು ಚಲಾಯಿಸುವುದರಿಂದ ವ್ಯಕ್ತಿಯ ಸಾವಿಗೆ ಕಾರಣ ವಾಗಬಹುದು. ರಸ್ತೆ ನಿಯಮಗಳನ್ನು ಪಾಲನೆ ಮಾಡುವುದರಿಂದ ಅಪಘಾತಗಳನ್ನು ತಡೆಯಬಹುದು. ಸಾರ್ವಜನಿಕರು ಹಾಗೂ ಪ್ರತಿಯೋಬ್ಬ ನಾಗರಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕವಿವಿ ಕುಲಸಚಿವ ಡಾ. ಎ.ಚನ್ನಪ್ಪ, ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಎಂ.ಪಿ., ಕೆಸಿಡಿ ಪ್ರಾಚಾರ್ಯ ಡಾ.ಡಿ.ಬಿ.ಕರಡೊಣಿ, ಕವಿವಿ ಎನ್ ಎಸ್‍ಎಸ್ ಸಂಯೋಜಕ ಡಾ.ಎಂ.ಬಿ.ದಳಪತಿ ಸೇರಿದಂತೆ ಇತರರು ಇದ್ದರು.
ಧಾರವಾಡ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಸ್ವಾಗತಿಸಿದರು. ಧಾರವಾಡ ಪಶ್ಚಿಮ ವಿಭಾಗದ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ ವಂದಿಸಿದರು. ಜಿ.ವಿ.ದಿನಮನಿ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾಲ್ನಡಿಗೆ ಜಾಥಾದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಕೆಸಿಡಿ ಎನ್‍ಎಸ್‍ಎಸ್ ಸ್ವಯಂ ಸೇವಕರು, ರಾಯಾಪೂರದ ಕೆಎಸ್‍ಆರ್‍ಪಿ ಬಟಾಲಿಯನ್, ಹುಬ್ಬಳ್ಳಿ-ಧಾರವಾಡ ಮೋಟಾರ ಡ್ರೈವಿಂಗ್ ಸ್ಕೂಲ್ ಅಸೋಸಿಯಷನ್, ಕವಿವಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲ್ನಡಿಗೆ ಜಾಥಾ ಕಾರ್ಯಕ್ರಮವು ಕೆಸಿಡಿಯಿಂದ ಆರಂಭಗೊಂಡು ಎಲ್‍ಐಸಿ ಮೂಲಕ ಆಲೂರು ವೆಂಕಟರಾವ್ ವೃತ್ತ, ಕೋರ್ಟ್ ಸರ್ಕಲ್ ಮೂಲಕ ಆಲೂರು ವೆಂಕಟರಾವ್ ಭವನದಲ್ಲಿ ಮೂಕ್ತಾಯಗೊಂಡಿತ್ತು.**********************************