ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ…!!

ಟಿಳಕವಾಡಿಯ ಕಲಾಮಂದಿರ ಲೋಕಾರ್ಪಣೆ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಏ.20 : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಸ್ಮಾರ್ಟಸಿಟಿ ಯೋಜನೆಯಡಿ 2.62 ಎಕರೆ ವಿಸ್ತೀರ್ಣದಲ್ಲಿ 47.83 ವೆಚ್ಚದಲ್ಲಿ ನಿರ್ಮಿಸಲಾಗಿರುವ ಟಿಳಕವಾಡಿಯ ಆಧುನಿಕ ಸೌಲಭ್ಯವುಳ್ಳ ಬಹುಮಹಡಿ ಸಂಕೀರ್ಣ ಕಟ್ಟಡವನ್ನು (ಕಲಾಮಂದಿರ) ರವಿವಾರ (ಏ.20) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಬಹುಪಯುಕ್ತವಾದ ಕಲಾಮಂದಿರ ಮತ್ತು ವಾಣಿಜ್ಯ ಮಳಿಗೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯ ಜತೆ ಆದಾಯ ಕೂಡ ಬರಲಿದೆ. ಈ ಆದಾಯವನ್ನು ನಗರದ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು. ಮಳಿಗೆಗಳನ್ನು ಹರಾಜು ಮಾಡಿ ಅದರಿಂದ ಬರುವ ಆದಾಯ ನಗರದ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ-ಕೇಂದ್ರ ಸರಕಾರಗಳು ತಲಾ ಶೇ.50 ರಷ್ಟು ಅನುದಾನವನ್ನು ಒದಗಿಸಿವೆ. ಬೆಳಗಾವಿ ನಗರದಲ್ಲಿ ಇನ್ನು ಬಾಕಿ ಉಳಿದ ಕೆಲ ಕಾಮಗಾರಿಗಳು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು.
ಹಿಂದಿನ ಸರಕಾರದ ಅವಧಿಯಲ್ಲಿಯೇ ಪೌರಕಾರ್ಮಿಕರನ್ನು ಖಾಯಂ ಮಾಡಲು ನಿರ್ಧರಿಸಲಾಗಿತ್ತು. ಗುತ್ತಿಗೆದಾರರ ಬದಲಾಗಿ ನೇರ ನೇಮಕಾತಿ ಮೂಲಕ ಕನಿಷ್ಠ 17 ಸಾವಿರ ರೂಪಾಯಿ ವೇತನ ನೀಡಲಾಗುತ್ತಿದೆ.
ಪೌರಕಾರ್ಮಿಕರ ಖಾಯಂ ಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದಲ್ಲದೇ ಚಾಲಕರು, ಕ್ಲೀನರ್ ಗಳಿಗೆ ಕನಿಷ್ಠ ವೇತನ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಎಲ್ಲ ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡಲು ನಿರ್ಧರಿಸಲಾಗಿದೆ.
ಹಲಗಾ ಎಸ್.ಟಿ.ಪಿ. ಹೆಚ್ಚಿನ ಪರಿಹಾರದ ಭರವಸೆ:
ಹಲಗಾ ಎಸ್.ಟಿ.ಪಿ. ಕಾಮಗಾರಿಗೆ ಸಂಬಂಧಿಸಿದಂತೆ ಹೆಚ್ಚಿನ ಜಮೀನು ಭೂಸ್ವಾಧೀನ ಪರಿಹಾರ ಒದಗಿಸಲು ಅನುಕೂಲವಾಗುವಂತೆ ಹೆಚ್ಚಿನ ಪರಿಹಾರ ನೀಡಲು ಕಡತವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯದಲ್ಲಿ ಒಟ್ಟಾರೆ 6928 ಕೋಟಿ ರೂಪಾಯಿ ಸ್ಮಾರ್ಟ್ ಸಿಟಿ ಯೋಜನೆಗೆ ಬಿಡುಗಡೆಯಾಗಿದ್ದು, ಇದರಲ್ಲಿ 3500 ಕೋಟಿ ರಾಜ್ಯದ ಪಾಲು ಇದೆ. ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇದಕ್ಕೂ ಮುಂಚೆ ಮಾತನಾಡಿದ ನಗರಾಭಿವೃದ್ಧಿ ಇಲಾಖೆಯ ಸವರಾದ ಭೈರತಿ ಸುರೇಶ್, ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಭಾಗಿತ್ವದ ಸ್ಮಾರ್ಟ್ ಸಿಟಿ ಯೋಜನೆಯಡಿ ಅತ್ಯಾಧುನಿಕ ಕಲಾ ಮಂದಿರ ಹಾಗೂ ವಾಣಿಜ್ಯ ಮಳಿಗೆ ಸ್ಥಾಪಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ಇದಾಗಿದೆ ಎಂದರು.
ರಾಜ್ಯದ ಎಲ್ಲೆಡೆ ವಾಣಿಜ್ಯ ಸಂಕೀರ್ಣ, ಬಸ್ ನಿಲ್ದಾಣ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಸಾರ್ವಜನಿಕರು ಈ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವ ಭೈರತಿ ಸಲಹೆ ನೀಡಿದರು.
ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲ ಪೌರಕಾರ್ಮಿಕರರಿಗೆ ಸ್ಥಳೀಯ ಸಂಸ್ಥೆಗಳ ಮೂಲಕವೇ ವೇತನ ನೀಡುವುದರ ಜತೆಗೆ ಅವರನ್ನು ಸರಕಾರಿ ನೌಕರರಾಗಿ ಪರಿಗಣಿಸಲು ಕ್ರಮ ತೆಗೆದುಕೊಳ್ಳಲಾಗುವುದು.
ಎರಡು ದಾಖಲೆಗಳಿದ್ದರೆ ಕ್ರಯಪತ್ರ ಜತೆಗೆ ವಿದ್ಯುತ್ ಹಾಗೂ ನೀರು ಸರಬರಾಜು ಬಿಲ್ ಗಳನ್ನು ಕೂಡ ಪರಿಗಣಿಸಿ ಇ-ಖಾತೆ ಮಾಡಿಕೊಡಲು ಸರಕಾರ ನಿರ್ಧರಿಸಿದೆ. ಬೆಳಗಾವಿ ನಗರದಲ್ಲಿ 50 ಸಾವಿರಕ್ಕೂ ಅಧಿಕ ಆಸ್ತಿಗಳಿಗೆ ಇ-ಖಾತೆ ಮಾಡಿಕೊಡಲಾಗುವುದು.
ತಲಾ 200 ಕೋಟಿ ರೂಪಾಯಿಯಂತೆ ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಒಟ್ಟಾರೆ 200 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದೆ ಎಂದು ಸಚುವ ಭೈರತಿ ಸುರೇಶ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯ್ ಪಾಟೀಲ ಅವರು, ರಾಜ್ಯದಲ್ಲಿ ಬೆಳಗಾವಿಯಲ್ಲಿ ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಡಿ ವಿಶಿಷ್ಟ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಮತಕ್ಷೇತ್ರದಲ್ಲಿ ಇನ್ನೂ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಾಗುವುದು
ಎಂದು ಹೇಳಿದರು.
165 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ನಿರ್ಮಿಸಲಾಗುತ್ತಿರುವ ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ಇನ್ನೂ 17 ಎಕರೆ ಭೂಸ್ವಾಧೀನಕ್ಕೆ ಅನುಕೂಲವಾಗುವಂತೆ ಐದು ಕೋಟಿ ರೂಪಾಯಿ ಅನುದಾನವನ್ನು ಒದಗಿಸಬೇಕು ಎಂದು ಶಾಸಕ ಅಭಯ್ ಪಾಟೀಲ ಮನವಿ ಅವರು ಮುಖ್ಯಮಂತ್ರಿಗಳಿಗೆ ಮಾಡಿಕೊಂಡರು.
ವಿವಿಧ ಸೌಲಭ್ಯಗಳ ವಿತರಣೆ:
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಾನಗರ ಪಾಲಿಕೆ ವತಿಯಿಂದ ಶೇ.5 ರ ಯೋಜನೆಯಡಿ 4 ಜನ ವಿಕಲಚೇತನರಿಗೆ ಯಂತ್ರ ಚಾಲಿತ ಗಾಲಿ ಕುರ್ಚಿಗಳು, ಮಹಾನಗರ ಪಾಲಿಕೆಯಲ್ಲಿ ಖಾಯಂ, ನೇರಪಾವತಿ ಹಾಗೂ ಹೊರಗುತ್ತಿಗೆ ಅಧಾರದಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು/ಸ್ವಚ್ಛತಾ ಕಾರ್ಮಿಕರಿಗೆ ಸುರಕ್ಷತಾ ದಿರಸುಗಳು ಹಾಗೂ ಉಪಹಾರ ಸೇವಿಸುವ ಸಾಮಗ್ರಿಗಳನ್ನು ವಿತರಿಸಿದರು.
ಮಹಾನಗರ ಪಾಲಿಕೆಯ ಶೇ.24.10 ರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಂಡ ಹಾಗೂ 7.25 ಯೋಜನೆಯಡಿ ಇತರೆ ಹಿಂದುಳಿದ ವರ್ಗದ ಬಿ.ಇ ಮತ್ತು ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ಒಟ್ಟು 123 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಪೂರೈಸುವ ಯೋಜನೆಯಡಿ, ಸಾಂಕೇತಿಕವಾಗಿ 30 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಮಹಾನಗರ ಪಾಲಿಕೆಯ ಕಂದಾಯ ಶಾಖೆಯಿಂದ ಎ-ಖಾತಾ ಮತ್ತು ಬಿ-ಖಾತಾ (ಇ-ಖಾತಾ) ವಿತರಣೆ ಮಾಡಿದರು.
ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸರ್ಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್(ರಾಜು) ಸೇಠ್, ವಿಧಾನಪರಿಷತ್ ಸದಸ್ಯ ಚನ್ನರಾಜ ಹೊಟ್ಟಿಹೊಳಿ, ನಾಗರಾಜ್ ಯಾದವ, ಬುಡಾ ಅಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಮಹಾಪೌರರಾದ ಮಂಗೇಶ್ ಪವಾರ್, ಉಪ ಮಹಾಪೌರರಾದ ವಾಣಿ ವಿಲಾಸ್ ಜೋಶಿ, ಮಹಾನಗರ ಪಾಲಿಕೆ ಆಯುಕ್ತರಾದ ಶುಭ.ಬಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಸೈಯದಾ ಆಫ್ರೀನ್ ಬಾನು ಬಳ್ಳಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.*************************