ಕುಮಾರ ಗಂಧರ್ವ ಸಂಗೀತ ಶಾಲೆ ಈ ಭಾಗದ ಮಕ್ಕಳಿಗೆ ಪ್ರೇರಣೆ ನೀಡಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸುಳೆಬಾವಿಯಲ್ಲಿ ಹುಟ್ಟಿ, 5 ವರ್ಷದ ಬಾಲಕನಿದ್ದಾಗಲೇ ದಾವಣಗೆರೆಯಲ್ಲಿ ಮೊದಲ ಸಂಗೀತ ಕಚೇರಿ ನೀಡುವ ಮೂಲಕ ವಿಶ್ವವಿಖ್ಯಾತರಾದವರು ಕುಮಾರ ಗಂಧರ್ವರು. ಅಂತಾರಾಷ್ಟ್ರೀಯ ಖ್ಯಾತಿಯ ಕುಮಾರ ಗಂಧರ್ವರ ಹೆಸರಿನಲ್ಲಿ ಅವರ ತವರೂರಾದ ಸುಳೇಬಾವಿಯಲ್ಲಿ ಸಂಗೀತ ಶಾಲೆ ಆರಂಭವಾಗುತ್ತಿರುವುದು ನನಗೆ ಎಲ್ಲಿಲ್ಲದ ಸಂತಸವನ್ನು ಉಂಟು ಮಾಡಿದೆ. ಈ ಶಾಲೆ ಈ ಭಾಗದ ಮಕ್ಕಳಿಗೆ ಪ್ರೇರಣೆ ನೀಡುವ ಮೂಲಕ ಇನ್ನಷ್ಟು ಕಲಾವಿದರು ಬೆಳೆಯುವಂತಾಗಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸೋಮವಾರ ಸಂಜೆ ಸುಳೇಬಾವಿಯಲ್ಲಿ ಮುರಕುಂಬಿ ಇತಿಹಾಸ ಉಪಕ್ರಮದ ವತಿಯಿಂದ ನಿರ್ಮಿಸಲಾಗಿರುವ ಕುಮಾರ ಗಂಧರ್ವ ಸಂಗೀತ ಶಾಲೆ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕುಮಾರ ಗಂಧರ್ವರು 11 ವರ್ಷದವರಿದ್ದಾಗ ಅಲಹಾಬಾದಿನಲ್ಲಿ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಹಾಡಿದರು. 12 ರಾಗಗಳನ್ನು ಸೃಷ್ಟಿಸಿ, ಹಲವಾರು ಸಂಶೋಧನೆಗಳನ್ನು ಮಾಡಿ, ಸಂಶೋಧನಾತ್ಮಕ ಪುಸ್ತಕಗಳನ್ನು ಪ್ರಕಟಿಸಿದವರು ಕುಮಾರ ಗಂಧರ್ವರು. ಅಂತವರ ಹೆಸರಿನಲ್ಲಿ ಈ ಸಂಗೀತ ಶಾಲೆ ಆರಂಭವಾಗುತ್ತಿರುವುದು ನಿಜವಾಗಿಯೂ ನನಗೆ ಅತ್ಯಂತ ಖುಷಿಯ ಸಂಗತಿ. ಈ ಭಾಗದ ಮಕ್ಕಳು ಈ ಸಂಗೀತ ಶಾಲೆಯ ಪ್ರಯೋಜನ ಪಡೆಯಲಿ. ಕುಮಾರ ಗಂಧರ್ವರಂತಹ ಸಾವಿರಾರು ಸಂಗೀತಗಾರರು ನಮ್ಮ ಕ್ಷೇತ್ರದಿಂದ, ನಮ್ಮ ಜಿಲ್ಲೆಯಿಂದ ಬೆಳೆಯಲಿ ಎಂದು ಆಶಿಸುತ್ತೇನೆ ಎಂದು ಸಚಿವರು ಹೇಳಿದರು.
ಸಂಗೀತ ಎನ್ನುವುದು ಮನುಷ್ಯ ಹುಟ್ಟುವಾಗಿನಿಂದ ಹಿಡಿದು ಸಾಯುವವರೆಗೂ ಪ್ರತಿಯೊಬ್ಬರಿಗೂ ಬಿಡಲಾರದ ನಂಟು. ಸಂಗೀತ ಬಿಟ್ಟು ನಾವಿಲ್ಲ, ನಮ್ಮನ್ನು ಬಿಟ್ಟು ಸಂಗೀತವಿಲ್ಲ.
ಹುಟ್ಟಿದ ತಕ್ಷಣ ಮಗುವಿನ ಅಳುವ ಧ್ವನಿಯೇ ನಮಗೆಲ್ಲ ಇಂಪಾದ ಸಂಗೀತವಾಗಿ ಕೇಳಿಸುತ್ತದೆ. ಅದನ್ನು ಕೇಳಿ ನಾವೆಲ್ಲ ಎಷ್ಟು ಆನಂದಿಸುತ್ತೇವೆ. ಅದೇ ರೀತಿ ಮಗು ಅತ್ತಾಗ ನಾವೊಂದು ಹಾಡು ಹೇಳಿದರೆ ತಕ್ಷಣ ಅಳುವುದನ್ನು ನಿಲ್ಲಿಸಿ ಹಾಡು ಆಲಿಸುತ್ತದೆ. ತೊಟ್ಟಿಲಲ್ಲಿ ಹಾಕಿ ಹಾಡು ಹೇಳುತ್ತ ತೂಗಿದರೆ ಕ್ಷಣ ಮಾತ್ರದಲ್ಲಿ ಹಾಡು ಕೇಳುತ್ತ ಮಗು ನಿದ್ದೆಗೆ ಜಾರುತ್ತದೆ. ಊಟ ಮಾಡದೆ ಹಟ ಹಿಡಿದಾಗ ಒಂದು ಹಾಡನ್ನು ಹಾಡಿದರೆ ಮಗು ಊಟ ಮಾಡುತ್ತದೆ. ನಮಗೆ ಮನಸ್ಸಿಗೆ ಏನೋ ಬೇಸರವಾದಾಗ ಒಂದು ಸುಂದರವಾದ ಹಾಡನ್ನು ಕೇಳಿದರೆ ಬೇಸರವೆಲ್ಲ ಮಾಯವಾಗಿ ಮುಖದಲ್ಲಿ ಮಂದಹಾಸ ಮೂಡುತ್ತದೆ ಎಂದು ಸಚಿವರು ಹೇಳಿದರು.
ಸಂಗೀತದಿಂದ ಅದೆಷ್ಟೋ ರೀತಿಯ ಕಾಯಿಲೆಗಳು ಗುಣವಾಗುತ್ತವೆ ಎನ್ನುವುದು ಇತ್ತೀಚಿನ ಸಂಶೋಧನೆಯಿಂದ ಕಂಡು ಬಂದಿದೆ. ಹಾಗಾಗಿ ಅನೇಕ ಆಸ್ಪತ್ರೆಗಳಲ್ಲಿ ಮ್ಯೂಸಿಕ್ ಥೆರಫಿ ಕೂಡ ಚಿಕಿತ್ಸೆಯ ಒಂದು ವಿಧಾನವಾಗಿದೆ. ಅಂದರೆ ಸಂಗೀತಕ್ಕೆ ಅದೆಷ್ಟು ಶಕ್ತಿ ಇದೆ ಎನ್ನುವುದನ್ನು ನಾವು ನೀವೆಲ್ಲ ಮನಗಾಣಬಹುದು. ಸಂಗೀತಕ್ಕೆ ಪ್ರಕೃತಿಯೇ ತಾಯಿ ಎಂದು ಹೇಳಲಾಗುತ್ತದೆ. ಜೋರಾಗಿ ಮಳೆ ಹೊಯ್ಯುತ್ತಿದ್ದರೆ, ಸುಮ್ಮನೆ ಕಿವಿಗೊಟ್ಟು ಕೇಳಿದಲ್ಲಿ ಅಲ್ಲೂ ಒಂದು ಸಂಗೀತವಿದೆ. ಹಕ್ಕಿಗಳ ಇಂಚರದಲ್ಲಿ, ಹರಿಯುವ ನೀರಲ್ಲಿ, ಬೀಸುವ ಗಾಳಿಯಲ್ಲಿ, ಭ್ರಮರದ ಝೇಂಕಾರದಲ್ಲಿ, ಮುನಿಗಳ ಓಂಕಾರದಲ್ಲಿ ಸಹ ಸಂಗೀತವಿದೆ. ಅಷ್ಟೇ ಏಕೆ, ನಮ್ಮದೇ ಹೃದಯದ ಮಿಡಿತದಲ್ಲಿ ಸಹ ಸಂಗೀತವಿದೆ ಎಂದು ಅವರು ಹೇಳಿದರು.
ಸಂಗೀತವೆಂದರೆ ಅದೊಂದು ಅದ್ಭುತ ಶಕ್ತಿ, ಅದಕ್ಕೆ ದೊಡ್ಡ ಸಾಧನೆ ಬೇಕಾಗುತ್ತದೆ, ಎಲ್ಲರಿಗೂ ಅದು ಒಲಿಯುವುದಿಲ್ಲ. ಮನುಷ್ಯರಷ್ಟೇ ಅಲ್ಲ, ದೇವರಿಗೆ ಕೂಡ ಸಂಗೀತವೆಂದರೆ ತುಂಬಾ ಪ್ರೀತಿ.
ಯಾವುದೇ ಕಾರ್ಯಕ್ರಮವನ್ನು ಸಂಗೀತ ಅಥವಾ ಪ್ರಾರ್ಥನೆಯಿಂದಲೇ ಆರಂಭಿಸುತ್ತೇವೆ. ಅಷ್ಟೇ ಏಕೆ, ಕೃಷ್ಣನ ಪ್ರಿಯವಾದ ವಾದ್ಯ ಕೊಳಲು, ಶಿವನದು ಡಮರುಗ, ಸರಸ್ವತಿಯದು ವೀಣೆ, ನಾರದರದ್ದು ತಂಬೂರಿ. ಸಂಗೀತಕ್ಕೆ ದೇವರನ್ನು ಒಲಿಸಿಕೊಳ್ಳುವ ಶಕ್ತಿ ಇದೆ ಎನ್ನುತ್ತಾರೆ ಹಿರಿಯರು. ಸಂಗೀತವು ಮನುಷ್ಯನಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುತ್ತದೆ ಎನ್ನುವ ಮಾತಿದೆ. ಸಂಕುಚಿತ ಮನೋಭಾವವನ್ನು ತೊಡೆದು ವಿಶಾಲ ಮನೋಭಾವವನ್ನು ಬೆಳೆಸುತ್ತದೆ, ಕ್ರೌರ್ಯವನ್ನು ತೊಡೆದು ಹಾಕಿ ಮಾನವೀಯ ಗುಣಗಳನ್ನು ತುಂಬುತ್ತದೆ ಎಂದು ಸಚಿವರು ಹೇಳಿದರು.
ನಮ್ಮ ಸರಕಾರ ಸಾಹಿತ್ಯ, ಸಂಗೀತ ಸೇರಿದಂತೆ ಮನರಂಜನೆ ಕಾರ್ಯಕ್ರಮಗಳು, ಉತ್ಸವಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ವರ್ಷ ಮೈಸೂರು ದಸರಾ, ಹಂಪಿ ಉತ್ಸವ, ಕಿತ್ತೂರು ಉತ್ಸವ ಸೇರಿದಂತೆ ಎಲ್ಲ ಉತ್ಸವಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಈ ಉತ್ಸವಗಳಲ್ಲಿ ಸಂಗೀತ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ಹೇಳಿದರು.
ವಿದುಷಿ ಕಲಾಪಿನಿ ಕೋಮಕಾಳಿ ಮತ್ತು ಭುವೇಶ ಕೋಮಕಾಳಿ ಸಂಗೀತ ಶಾಲೆ ಉದ್ಘಾಟಿಸಿದರು. ಮುರಕುಂಬಿ ಇತಿಹಾಸ ಉಪಕ್ರಮದ ಅಧ್ಯಕ್ಷರಾದ ಡಾ.ವಿದ್ಯಾ ಮುರಕುಂಬಿ ಅಧ್ಯಕ್ಷತೆ ವಹಿಸಿದ್ದರು.
ಮಹೇಶ ಸುಗನೆಣ್ಣವರ, ದೇವಣ್ಣ ಬಂಗೆನ್ನವರ, ಬಸನಗೌಡ ಹುಂಕ್ರಿಪಾಟೀಲ, ಶಿವಾಜಿ ಹುಂಕ್ರಿಪಾಟೀಲ, ಫಕೀರವ್ವ ಅಮರಾಪುರ, ಇಸ್ಮಾಯಿಲ್ ತಿಗಡಿ, ಇಸಾಕ್ ಜಮಾದಾರ, ತಿಪ್ಪಣ್ಣ ಲೋಕರೆ, ಮಹಾದೇವ ರಾಗಿ, ಕಲ್ಲಪ್ಪ ಕೇಶಪ್ಪನಟ್ಟಿ, ಲಕ್ಷ್ಮಣ ಮಂಡು, ಮಲ್ಲೇಶ ಕಸಳ್ಳಿ, ಲಕ್ಷ್ಮಣ ಬಂಗೆನ್ನವರ, ವಿಶ್ವನಾಥ ಪಾಟೀಲ, ಅರ್ಜುನ ಮರಗಿ, ಕಲ್ಪನಾ ನಗಾರಿ, ಕಲ್ಲಪ್ಪ ಕಾಮಕರ, ಮಂಜುನಾಥ್ ಪೂಜೇರಿ, ಮಂಜುನಾಥ ಪಾತಲಿ, ವಿಠ್ಠಲ ಮಂಡು ಹಾಗೂ ಮರಕುಂಬಿ ಇತಿಹಾಸ ಉಪಕ್ರಮದ ಸದಸ್ಯರು ಉಪಸ್ಥಿತರಿದ್ದರು.************************