ಪ್ರಕೃತಿ ಬೆಳಗಾವಿ

*ಸಮೃದ್ಧ ಫೌಂಡೇಶನ್‌ನ ಅನಾಥಾಶ್ರಮಕ್ಕೆ ಪ್ರಯತ್ನ ಸಂಸ್ಥೆಯಿಂದ ನೆರವು*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸಮಾಜಸೇವೆಯ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಪ್ರಯತ್ನ ಸಂಸ್ಥೆ ವತಿಯಿಂದ ಶನಿವಾರ ಬೆಳಗಾವಿ ತಾಲೂಕಿನ ಬಿ.ಕೆ. ಕಂಗ್ರಾಳಿ ಗ್ರಾಮದ ಸಮೃದ್ಧ ಫೌಂಡೇಶನ್ ಮಕ್ಕಳ ಅನಾಥಾಶ್ರಮಕ್ಕೆ ಭೇಟಿ ನೀಡಿ ವಿವಿಧ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅನಾಥಾಶ್ರಮದ ಮಕ್ಕಳಿಗೆ ಶಾಲಾ ಪುಸ್ತಕಗಳು, ನೋಟ್‌ಬುಕ್‌ಗಳು, ಲೇಖನ ಸಾಮಗ್ರಿಗಳು, ದಿನಸಿ ಸಾಮಗ್ರಿಗಳು, ಬಿಸ್ಕತ್ ಹಾಗೂ ವಿವಿಧ ತಿಂಡಿಗಳನ್ನು ವಿತರಿಸಿ ಮಕ್ಕಳೊಂದಿಗೆ ಆತ್ಮೀಯವಾಗಿ ಸಮಯ ಕಳೆಯಲಾಯಿತು.

ಶಾಲಾ ಪುಸ್ತಕಗಳನ್ನು ಉದಾರವಾಗಿ ಕೊಡುಗೆಯಾಗಿ ನೀಡಿದ ಸಂಸ್ಥೆಯ ಸದಸ್ಯೆ ಅರುಣಾ ಚೌಧರಿ ಅವರ ಸೇವಾ ಮನೋಭಾವವನ್ನು ಸಂಸ್ಥೆಯು ವಿಶೇಷವಾಗಿ ಶ್ಲಾಘಿಸಿತು. ಅವರ ಕೊಡುಗೆಯು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರ ಭವಿಷ್ಯದ ಕನಸುಗಳಿಗೆ ಹೊಸ ಚೈತನ್ಯ ತುಂಬಲಿದೆ ಎಂದು ಅಧ್ಯಕ್ಷೆ ಶಾಂತಾ ಆಚಾರ್ಯ ತಿಳಿಸಿದರು.

ಈ ಸೇವಾ ಕಾರ್ಯ ಯಶಸ್ವಿಯಾಗಲು ಸಹಕರಿಸಿದ ಸಂಸ್ಥೆಯ ಎಲ್ಲ ಸದಸ್ಯರು ಹಾಗೂ ಹಿತೈಷಿಗಳಿಗೆ ಪ್ರಯತ್ನ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ. ಸಮಾಜದ ಸಹಕಾರದಿಂದ ಇಂತಹ ಸೇವಾ ಚಟುವಟಿಕೆಗಳನ್ನು ಮುಂದುವರಿಸಿ, ಅಗತ್ಯವಿರುವ ಮಕ್ಕಳ ಬದುಕಿನಲ್ಲಿ ಸಂತೋಷ, ಆಶಾಭಾವನೆ ಮತ್ತು ಆತ್ಮವಿಶ್ವಾಸ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಸಂದರ್ಭದಲ್ಲಿ ಪ್ರಯತ್ನ ಸಂಘಟನೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.*******************************

Leave a Reply

Your email address will not be published. Required fields are marked *

Back to top button