*ತಾಲ್ಲೂಕು ಪಂಚಾಯತಿಯ 52 ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜಿಗೆ ಆಗ್ರಹ: ಕರವೇ ಮನವಿ*

ಪ್ರಕೃತಿ ಬೆಳಗಾವಿ ಸುದ್ದಿ : ಕೃಷ್ಣರಾಜಪೇಟೆ ವರದಿ : ತಾಲ್ಲೂಕು ಪಂಚಾಯತಿ ಒಡೆತನದಲ್ಲಿರುವ ಒಟ್ಟು 52 ವಾಣಿಜ್ಯ ಮಳಿಗೆಗಳನ್ನು ಪಾರದರ್ಶಕವಾಗಿ ಬಹಿರಂಗ ಹರಾಜು ಪ್ರಕ್ರಿಯೆಯ ಮೂಲಕ ಹಂಚಿಕೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಎಸ್. ವೇಣು ಅವರು ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನೆಡಸಿ ಮಾತನಾಡಿದ ಅವರು ಇದೇ ಮಾರ್ಚ್ 17ರಂದು ಆನ್ಲೈನ್ ಮೂಲಕ ಟೆಂಡರ್ ಸಲ್ಲಿಸಲು ಅವಕಾಶವಿದ್ದು, ಮಾರ್ಚ್ 18ರಂದು ಬೆಳಿಗ್ಗೆ 11:00 ರಿಂದ ಸಂಜೆ 5:30 ರವರೆಗೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ. ಕೃಷ್ಣರಾಜಪೇಟೆ ಪಟ್ಟಣದ 40 ಮಳಿಗೆಗಳು ಹಾಗೂ ಕಿಕ್ಕೇರಿ ಪಟ್ಟಣದ 12 ಮಳಿಗೆಗಳು ಸೇರಿದಂತೆ ಒಟ್ಟು 52 ಮಳಿಗೆಗಳಿಗೆ ಹರಾಜು ನಡೆಯಲಿದೆ.
ಕಳೆದ 25 ರಿಂದ 30 ವರ್ಷಗಳಿಂದ ಈ ಮಳಿಗೆಗಳ ಬಾಡಿಗೆಯನ್ನು ಪರಿಷ್ಕರಿಸಲಾಗಿಲ್ಲ. ಮೂಲ ಬಾಡಿಗೆದಾರರು ಅತ್ಯಲ್ಪ ಮೊತ್ತವನ್ನು ಪಂಚಾಯತಿಗೆ ಪಾವತಿಸಿ, ಬೇರೆಯವರಿಂದ ತಿಂಗಳಿಗೆ 20 ರಿಂದ 30 ಸಾವಿರ ರೂಪಾಯಿಗಳವರೆಗೆ ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಭಾರಿ ನಷ್ಟವಾಗುತ್ತಿದೆ, ಮಳಿಗೆಯನ್ನು ಯಾರು ಬಾಡಿಗೆಗೆ ಪಡೆಯುತ್ತಾರೋ ಅವರೇ ಸ್ವತಃ ವ್ಯಾಪಾರ ಮಾಡಬೇಕು. ಒಳ-ಬಾಡಿಗೆಗೆ ಅವಕಾಶ ನೀಡಬಾರದು.
*_ಕಟ್ಟುನಿಟ್ಟಿನ ಕ್ರಮ:_* _ಹರಾಜಿನಲ್ಲಿ ಮಳಿಗೆ ಪಡೆದ ನಂತರ ಅದನ್ನು ತೆಗೆದುಕೊಳ್ಳದಿದ್ದರೆ, ಅಂತಹ ಬಿಡ್ದಾರರ ಇಎಂಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಅಸಕ್ತ ನಿರುದ್ಯೋಗಿ ಯುವಕರು ಈ ಬಹಿರಂಗ ಹರಾಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಿಯಮಾನುಸಾರ ಮಳಿಗೆಗಳನ್ನು ಪಡೆದು ತಮ್ಮ ಸ್ವಯಂ ಉದ್ಯೋಗವನ್ನು ಆರಂಭಿಸಬೇಕು ಎಂದು ಕರವೇ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಎಸ್. ವೇಣು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕರವೇ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಟೆಂಪೋ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್, ತಾಲ್ಲೂಕು ಸಂಚಾಲಕ ಸ್ವಾಮಿ, ಯುವ ಘಟಕದ ಕಾರ್ಯದರ್ಶಿ ಮನು, ಕೊಮ್ಮೇನಹಳ್ಳಿ ಅನಿಲ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಹೀರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.*******************************






